ಪ್ರಮುಖ ದಾಖಲೆಗಳಲ್ಲಿ ಪಡಿತರ ಚೀಟಿಗೂ ಮಹತ್ವ ಇದೆ. ಇದು ಬರೀ ಪರಿತರ ಪಡೆಯಲು ಅಷ್ಟೇ ಅಲ್ಲದೆ, ಸರ್ಕಾರಿ ಸೌಲಭ್ಯಗಳು, ಅರ್ಜಿ ಸಲ್ಲಿಕೆ ಸೇರಿದಂತೆ ಅನೇಕ ಕಾರ್ಯಗಳಿಗೆ ಅಗತ್ಯವಿದೆ. ಹಲವು ವಿಧದ ರೇಷನ್ ಕಾರ್ಡ್‌ಗಳಿದ್ದು, ಒಂದೊಂದರಲ್ಲಿ ಪಡಿತರ ವಿತರಣೆ ಪ್ರತ್ಯೇಕ. ಆದರೆ, ಗೋಣಿ ಚೀಲ ನಿಯಮ ಎಲ್ಲರಿಗೂ ಒಂದೇ ರೀತಿಯಾಗಿದೆ.
ಇತ್ತೀಚೆಗೆ ರಾಜ್ಯದಲ್ಲಿ ನಕಲಿ ದಾಖಲೆಗಳ ಆಧಾರದಲ್ಲಿ ಪಡೆದಿರುವ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸಿ ಎಪಿಎಲ್‌ಗೆ ವರ್ಗಾವಣೆ ಮಾಡುವ ಕೆಲಸ ಸರ್ಕಾರ ಮುಂದುವರೆಸಿದೆ. ಅನರ್ಹರ ಕೈಯಲ್ಲಿರುವ ಪಡಿತರ ಚೀಟಿಗಳನ್ನು ರದ್ದುಪಡಿಸುವ ಕಾರ್ಯವೂ ನಡೆಯುತ್ತಿದೆ. ಈ ನಡುವೆ ಗೋಣಿ ಚೀಲ ನಿಯಮ ಮುನ್ನೆಲೆಗೆ ಬಂದಿದೆ.
ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಕಾರ್ಡ್ ಹೊಂದಿರುವವರಿಗೆ ಅಕ್ಕಿ ಪಡೆಯಲು ಗೋಣಿ ಚೀಲವನ್ನು ಉಚಿತವಾಗಿ ನೀಡುವುದಿಲ್ಲ. ಗ್ರಾಹಕರು ತಮ್ಮದೇ ಚೀಲವನ್ನು ತರಬೇಕಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಸರ್ಕಾರಿ ಪಡಿತರ ವಿತರಕರ ಸಂಘದ ಅಧ್ಯಕ್ಷ ಕೇಶವ ಮೂರ್ತಿ ಅವರು ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದರು.
ಇತ್ತೀಚೆಗೆ ಕಟೀಲು ನ್ಯಾಯಬೆಲೆ ಅಂಗಡಿಯೊಂದರಲ್ಲಿ ಗ್ರಾಹಕರು ಗೋಣಿಚೀಲ ಉಚಿತವಾಗಿ ಕೊಡಬೇಕೆಂದು ಅಂಗಡಿದಾರರನ್ನು ಬೆದರಿಸುವ ವಿಡಿಯೋ ವೈರಲ್ ಆಗಿತ್ತು. ಇದರಿಂದ ಸಾರ್ವಜನಿಕರಲ್ಲಿ ತಪ್ಪು ಕಲ್ಪನೆ ಮೂಡಿದೆ ಮತ್ತು ಎಲ್ಲಾ ನ್ಯಾಯಬೆಲೆ ಅಂಗಡಿದಾರರನ್ನು ಕೆಟ್ಟ ದೃಷ್ಟಿಯಲ್ಲಿ ನೋಡಲು ಕಾರಣವಾಗಿದೆ ಎಂದು ಅವರು ಹೇಳಿದರು.
ಲಾಭಾಂಶ ಹಂಚಿಕೆ
ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಪ್ರತಿ ಕ್ವಿಂಟಾಲ್‌ನಲ್ಲಿ ಸರ್ಕಾರ 56 ರೂಪಾಯಿ ಲಾಭಾಂಶ ನಿಗದಿ ಮಾಡಿದೆ. ಅದರಲ್ಲಿ 36 ರೂಪಾಯಿ ನಗದು ರೂಪದಲ್ಲಿ ಸಿಗುತ್ತದೆ. ಉಳಿದ 20 ರೂಪಾಯಿಗಳ ಬದಲು ಎರಡು ಗೋಣಿಚೀಲಗಳನ್ನು ನೀಡಲಾಗುತ್ತದೆ. ಈ ವ್ಯವಸ್ಥೆಯ ಕುರಿತು ಸಾರ್ವಜನಿಕರಿಗೆ ಸರಿಯಾದ ಮಾಹಿತಿ ಇಲ್ಲದ ಕಾರಣ ಸಮಸ್ಯೆಗಳು ಹೆಚ್ಚುತ್ತಿವೆ.
ಒನ್ ನೇಶನ್ ಒನ್ ರೇಶನ್ ಕಾರ್ಡ್
ಕೇಂದ್ರ ಸರ್ಕಾರದ ಆದೇಶದ ಪ್ರಕಾರ, ಒನ್ ನೇಶನ್ ಒನ್ ರೇಶನ್ ಕಾರ್ಡ್ ಯೋಜನೆಯಡಿಯಲ್ಲಿ ಯಾವುದೇ ಅರ್ಹ ವ್ಯಕ್ತಿಗೆ ಅಕ್ಕಿ ವಿತರಿಸಲೇಬೇಕಾಗಿದೆ.
ಕರ್ನಾಟಕದ ಮಾಜಿ ಆಹಾರ ಸಚಿವ ಹಾಗೂ ಪ್ರಸ್ತುತ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರು ಇತ್ತೀಚೆಗೆ ವಿಧಾನಸಭೆಯಲ್ಲಿ ಎಲ್ಲಾ ಪಡಿತರ ಅಂಗಡಿಗಳಿಗೆ ಶೇಕಡಾ 10ರಷ್ಟು ಹೆಚ್ಚುವರಿ ಅಕ್ಕಿ ವಿತರಣೆ ಮಾಡಬೇಕು ಹಾಗೂ ಎಪಿಎಲ್ ಕಾರ್ಡ್‌ದಾರರಿಗೂ ಅಕ್ಕಿ ನೀಡಬೇಕು ಎಂದು ಆಗ್ರಹಿಸಿದರು.
ಅಂಗಡಿ ಮಾಲೀಕರ ಅಳಲು
ಕಟೀಲ್ ನ್ಯಾಯಬೆಲೆ ಅಂಗಡಿ ಮಾಲೀಕನೊಬ್ಬ ತನ್ನ ಅಂಗಡಿಯಲ್ಲಿ ಸ್ಥಳೀಯ ಗ್ರಾಹಕರು ಪ್ರತಿ ತಿಂಗಳು ಗೋಣಿಚೀಲ ನೀಡುವಂತೆ ಒತ್ತಾಯಿಸುತ್ತಾರೆಂದು ಅಳಲು ತೋಡಿಕೊಂಡರು. ತಾನು ಆಕ್ಷೇಪಿಸಿದ ಬಳಿಕ ಅವರೇ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ ಎಂದು ಹೇಳಿದರು. ಕೆಲ ಗ್ರಾಹಕರ ಹಿಂಸೆಯಿಂದ ತಾನು ತೊಂದರೆ ಅನುಭವಿಸುತ್ತಿದ್ದೇನೆ ಎಂದು ಅವರು ಸಚಿವರು ಹಾಗೂ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ಮತ್ತೊಂದೆಡೆ, ಬಿಪಿಎಲ್ ಕಾರ್ಡ್ ಹೊಂದಲು ಅರ್ಹತೆಯೇ ಇಲ್ಲದ ಕುಟುಂಬಗಳು ನಕಲಿ ದಾಖಲೆಗಳಿಂದ ಕಾರ್ಡ್ ಪಡೆದು ಅಕ್ಕಿ ಪಡೆಯುತ್ತಿರುವ ಆರೋಪಗಳೂ ಕೇಳಿಬಂದಿವೆ.
ಇಂತಹ ಸಮಸ್ಯೆಗಳು ಒಂದೇ ಜಿಲ್ಲೆಯಲ್ಲಿ ಅಲ್ಲ, ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಂಡುಬರುತ್ತಿವೆ. ಕೆಲ ಕಡೆ ಗ್ರಾಹಕರು ಅಂಗಡಿ ಮಾಲೀಕರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದರೆ, ಕೆಲವೆಡೆ ಮಾಲೀಕರು ಗ್ರಾಹಕರ ಮೇಲೆ ದರ್ಪ ಮೆರೆಯುತ್ತಿರುವ ಆರೋಪಗಳೂ ಕೇಳಿಬಂದಿವೆ. ಈ ಎಲ್ಲಾ ಅಸಮಾಧಾನಗಳಿಗೆ ಸರ್ಕಾರವೇ ಕಡಿವಾಣ ಹಾಕಬೇಕಾಗಿದೆ.
ಇಳಿಕೆಯ ನಂತರ ಅಡಿಕೆ ಧಾರಣೆ ಪುನಃ ಏರಿಕೆ: ರೈತರಲ್ಲಿ ಹೊಸ ಭರವಸೆ

2 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ನಿರಂತರ ಸೇವೆ ಸಲ್ಲಿಸುತ್ತಿದ್ದೇನೆ. ಸ್ಥಳೀಯ ಸುದ್ದಿಗಳಿಂದ ಅಂತಾರಾಷ್ಟ್ರೀಯ ವಿಷಯಗಳವರೆಗೆ, ನಿಖರವಾದ ವರದಿ ಮತ್ತು ಪ್ರಾಮಾಣಿಕ ಮಾಹಿತಿಯನ್ನೇ ಒದಗಿಸಲು ನಮ್ಮ ಪ್ಲಾಟ್ಫಾರ್ಮ್ ಆರಂಭಿಸಲಾಗಿದೆ.
ಜವಾಬ್ದಾರಿ ಹಾಗೂ ನೈತಿಕತೆ ಪ್ರಧಾನ ಗುರಿಗಳಾಗಿದ್ದು, truth-first journalism ನಮ್ಮ ಧ್ಯೇಯ.






